Showing posts with label prasanga. Show all posts
Showing posts with label prasanga. Show all posts

Sunday, March 23, 2014

ಯಕ್ಷ ಕಥೆ : ಶ್ರೀ ಕೃಷ್ಣ ಪಾರಿಜಾತ ಮತ್ತು ನರಕಾಸುರ ವಧೆ

ಶ್ರೀ ಗುರು ಗಣಾಧಿಪತಯೇ ನಮ:

deepak rao pejavar as krishna 
ನಾರದ ಮಹರ್ಷಿಗಳು ಶ್ರೀ ಕ್ರಷ್ಣನಿಗೆ, ಅವರಿಗೆ ದೇವಲೋಕದಲ್ಲಿ ದೊರಕಿದಂತ ಪಾರಿಜಾತ ಪುಷ್ಪವನ್ನು ನೀಡುತ್ತಾರೆ. ಆ ಪುಷ್ಪವು ಬಹಳ ಮಹತ್ವಪೂರ್ಣವಾದದ್ದೆಂದೂ, ಅದನ್ನು ಮುಡಿಯುವ ಯೋಗ್ಯತೆ ಕೃಷ್ಣನ ಸತಿಯಾದವರಲ್ಲಿ ರುಕ್ಮಿಣಿಗೆ ಮಾತ್ರ ಎಂದು ನಾರದ ಕೃಷ್ಣರು ತೀರ್ಮಾನಿಸುತ್ತಾರೆ. ನಾರದನ ಆಸೆಯಂತೆ ಆತನ ಅಜ್ಜಿಯಾದ ರುಕ್ಮಿಣಿಯ ಮುಡಿಗೆ ಪಾರಿಜಾತವನ್ನು ಕೃಷ್ಣನು ಮುಡಿಸುತ್ತಾನೆ. ಈ ದೃಷ್ಯ ನೋಡಿ ಧನ್ಯನಾದೆನೆಂದು ನಾರದನು ಅಲ್ಲಿಂದ ತೆರಳುತ್ತಾನೆ.


ಈ ವಿಷಯವು ಕೃಷ್ಣನ ಮತ್ತೊಬ್ಬ ಪತ್ನಿಯಾದ ಸತ್ಯಭಾಮನ ಸಖಿಯಾದವಳಿಗೆ ತಿಳಿಯುತ್ತದೆ. ಆಕೆ ತನ್ನ ಒಡತಿಯಾದ ಸತ್ಯಭಾಮನಲ್ಲಿ ಪಾರಿಜಾತವನ್ನು ಮುಡಿಯುವ ಯೋಗ್ಯತೆ ರುಕ್ಮಿಣಿಗೆ ಮಾತ್ರವಿರುವುದಾಗಿ ಕೃಷ್ಣ ನಾರದರು ತೀರ್ಮಾನಿಸಿದ್ದಾರೆ  ಹಾಗೂ ಆಕೆಗೇ  ದೇವಲೋಕದಿಂದ ತಂದಂತಹ ಆ ಪುಷ್ಪವನ್ನು ಕೃಷ್ಣನು ಮುಡಿಸಿರುವುದಾಗಿ ತಿಳಿಸುತ್ತಾಳೆ. ಇದನ್ನು ತಿಳಿದ ಸತ್ಯಭಾಮನಲ್ಲಿ ಮತ್ಸರದ ಕಿಚ್ಚು ಹೊತ್ತುತ್ತದೆ.


                                                                                                                                                                                        

  
                                 
ಸತ್ಯಭಾಮ ಕೃಷ್ಣನಲ್ಲಿ ಕೋಪಗೊಳ್ಳುತ್ತಾಳೆ. ತಾನುಟ್ಟ ಒಡವೆ, ಒಳ್ಳೆಯ ವಸ್ತ್ರ ಗಳನೆಲ್ಲ ತ್ಯಜಿಸಿ ಸಜ್ಜಾಗೃಹವನ್ನು ಸೇರಿ ಆಹಾರ ಬಿಟ್ಟು ಉಪವಾಸದಿಂದಿರುತ್ತಾಳೆ . ಈ ವಿಷಯವನ್ನು ಕೃಷ್ಣನಿಗೆ ತಿಳಿಸುವಂತೆ ಸಖಿಗೆ ಆಜ್ಞಾಪಿಸುತ್ತಾಳೆ.



ಸತ್ಯಭಾಮ ಕುಪಿತಗೊಂಡಿರುವ ವಿಷಯವನ್ನು ಸಖಿಯು ಕೃಷ್ಣನಲ್ಲಿ ಬಂದು ತಿಳಿಸುತ್ತಾಳೆ. ಶ್ರೀ ಕೃಷ್ಣನ ಸೇವಕನು, ಸತ್ಯಭಾಮನ ಸಖಿಯ ಗಂಡ. ಈ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಸಂಭಾಷಣೆ ಉತ್ತಮ ಹಾಸ್ಯದೊಂದಿಗೆ ಪ್ರೇಕ್ಷಕರನ್ನು ರಂಜಿಸಿತು.

ಮುಂದಿನ ದೃಶ್ಯದಲ್ಲಿ ಶ್ರೀ ಕೃಷ್ಣ ಹಾಗು ಆತನ ಸೇವಕನು ಸತ್ಯಭಾಮೆಯ ಸಜ್ಜಾ ಕೋಣೆಯ ಹೊರಗಿರುತ್ತಾರೆ. ರಂಗಸ್ಥಳದ ಮಧ್ಯ ಭಾಗದಲ್ಲಿರುವ ಇನ್ನೊಂದು ಪರದೆಯ ಮೂಲಕ ಈ ಕೋಣೆಯ ಸೃಷ್ಟಿ. ಕೃಷ್ಣನು ಕೋಣೆಯ ಹೊರಗಿನಿಂದ ಸತ್ಯಭಾಮನಲ್ಲಿ  ಬಾಗಿಲು ತೆರೆಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಸತ್ಯಭಾಮ ಕೃಷ್ಣನ ಗುರುತು ಹಿಡಿಯುವಲ್ಲಿ ವಿಫಲವಾಗಿ (ಅಥವಾ ನಟಿಸಿ) ಬಾಗಿಲು ತೆರೆಯುವುದಿಲ್ಲ. ಕೃಷ್ಣನು ತಾನು ಗೋವಳ ಗಿರಿಧಾರಿ, ಕಾಳಿಂಗ ಮರ್ಧನ ಕೃಷ್ಣ ಬಂದಿರುವುದಾಗಿ ಪರಿ ಪರಿಯಾಗಿ ತನ್ನ ಪರಿಚಯ ಹೇಳಿಕೊಳ್ಳುತ್ತಾನೆ. ಇದ್ಯಾವುದಕ್ಕೂ ಬಾಗಿಲು ತೆರೆಯದ ಸತ್ಯಭಾಮ, ನಿನ್ನ ಪತಿಯಾದ ಶ್ರೀ ಕೃಷ್ಣ ಬಂದಿದ್ದೇನೆಂದಾಗ  ಬಾಗಿಲು ತೆರೆಯುತ್ತಾಳೆ.

ಕೃಷ್ಣನು ವಿಧ ವಿಧವಾಗಿ ಸತ್ಯಭಾಮಾನನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಾನೆ.



                                                                                                                                                                                                                                                          
ಕೊನೆಗೆ ರುಕ್ಮಿಣಿಗೆ ಕೇವಲ ಒಂದು ಪಾರಿಜಾತ ಪುಷ್ಪವನ್ನು ನೀಡಿದ್ದೇನೆ, ಆದರೆ ನಿನಗೆ ಆ ದೇವಲೋಕದಲ್ಲಿರುವ ಪಾರಿಜಾತ ವ್ರಕ್ಷ ವನ್ನೇ ನೀಡುತ್ತೇನೆಂದು ಮಾತು ಕೊಟ್ಟಾಗ ಸತ್ಯಭಾಮ ಸಮಾಧಾನಗೊಳ್ಳುತ್ತಾಳೆ.


_________________________________________________________________________________

                                                                                                                                                                                                                                                                                                                                                                                                                                                                                                                   

ನರಕಾಸುರನ ಪ್ರವೇಷಕ್ಕೆ ಚಂಡೆಯ ಅಬ್ಬರ



ಅತ್ಯಂತ ಬಲಶಾಲಿಯಾದ ನರಕಾಸುರನೆಂಬ ರಾಕ್ಷಸನು ಬಾಣಾಸುರನೆಂಬ ಅಸುರನೊಡಗೂಡಿ ಅಹಂಕಾರದಿಂದ ಇಡೀ ಭೂಲೋಕವನ್ನೇ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾನೆ. ಇಲ್ಲಿಗೇ ನಿಲ್ಲದೆ ದೇವಲೋಕವನ್ನು  ಸಹ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಗುತ್ತಾನೆ.

ನರಕಾಸುರ, ಬಾಣಾಸುರರು ದೇವಲೋಕದ ದ್ವಾರಪಾಲಕನನ್ನು ಇದಿರುಗೊಳ್ಳುವ ದ್ರಶ್ಯ. ಈ ಸಮಯದಲ್ಲಿ ಸಂಧರ್ಭೋಚಿತವಾದ ಮತ್ತು ಅಸಹಜವೆನಿಸದೆ ಲೌಕಿಕವನ್ನು ನೆನಪುಮಾಡಿಸುವಂತೆ ಇರುವ ಸಂಭಾಷಣೆ ಮುದ ನೀಡುತ್ತದೆ. 
 ದೇವತೆಗಳ ಇಂದ್ರನಾದ ದೇವೇಂದ್ರನೂ ನರಕಾಸುರನ ಆರ್ಭಟಕ್ಕೆ ತಾಳಲಾರದೆ ದೇವಲೋಕದಿಂದ ಓಡಿದನು. ನರಕಾಸುರನು ದೇವತೆಗಳ ಮಾತೆಯಾದ ಅಧಿತಿಯ ಕರ್ಣ ಕುಂಡಲಗಳನ್ನು ಹಾಗು ೧೬೦೦೦ ಸ್ತ್ರೀಯರನ್ನು ಅಪಹರಿಸುತ್ತಾನೆ.

ದೇವೇಂದ್ರನು 'ನಮ್ಮನ್ನು ರಕ್ಷಿಸು' ಎಂದು ಶ್ರೀ ಕೃಷ್ಣನ ಮೊರೆ ಹೋಗುತ್ತಾನೆ.

 
ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಲು ಅಣಿಯಾದಾಗ ಸತ್ಯಭಾಮ ತಾನೂ ಬರುವೆನೆಂದು, ಅವನೊಂದಿಗೆ  ದೇವಲೋಕಕ್ಕೆ ತೆರಳುತ್ತಾಳೆ. 

ಶ್ರೀ ಕೃಷ್ಣನು ತನ್ನ ಪಾಂಚಾಜನ್ಯವನ್ನು ಊದಿ ಯುದ್ಧಾಹ್ವಾನ ನೀಡುತ್ತಾನೆ.









ಈ  ಸಮಯದಲ್ಲಿ ಬರುವ ಮುರ ಎಂಬ ಅಸುರನನ್ನು ಹರಿಯು ಸಂಹರಿಸಿ ಮುರಾರಿ ಎಂಬ ಹೆಸರು ಪಡೆಯುತ್ತಾನೆಈ ಸಂಧರ್ಭದಲ್ಲಿ ನರಕಾಸುರನಿಗೆ ಸುದ್ದಿ ತಲುಪಿಸುವ ಧೂತನ ಪಾತ್ರಧಾರಿಯ ವೇಷ ಭಯಾನಕವಾಗಿತ್ತು.



ಮುಂದೆ ನರಕಾಸುರನಿಗೂ ಶ್ರೀ ಹರಿಗೂ ಕಾಳಗ ನೆಡೆದು ಹರಿಯು ನರಕಾಸುರನಿಂದ ಘಾಸಿಗೊಳ್ಳುತ್ತಾನೆ. ಇದರಿಂದ ಕುಪಿತಳಾದ ಸತ್ಯಭಾಮೆ ನರಕಾಸುರನೊಂದಿಗೆ ಹೋರಾಡಿ ಆತನನ್ನು ಸಂಹರಿಸುತ್ತಾಳೆ.  ಸಾಯುವ ಮೊದಲು ಕೃಷ್ಣ, ಸತ್ಯಭಾಮೆಯರಲ್ಲಿ ನರಕಾಸುರನು ತನ್ನ ಸಾವಿನ ದಿನವನ್ನು ಪ್ರತಿ ವರ್ಷ "ನರಕ ಚತುರ್ದಶಿ " ಎಂದು ಭೂಲೋಕದ ಜನರು ಆಚರಿಸಬೇಕೆಂಬ ವರವನ್ನು ಪಡೆಯುತ್ತಾನೆ.  ಶ್ರೀ ಕೃಷ್ಣ ಸತ್ಯಭಾಮೆಯರು ಅಧಿತಿಯ ಕರ್ಣ ಕುಂಡಲಗಳನ್ನು ಆಕೆಗೆ ಹಿಂದಿರಿಗಿಸುತ್ತಾರೆ. ಶ್ರೀ ಹರಿಯು ೧೬೦೦೦ ಸ್ತ್ರೀಯರನ್ನು ವರಿಸುತ್ತಾನೆ. ದೇವಲೋಕದಿಂದ ಹಿಂದಿರುಗುವಾಗ ಸತ್ಯಭಾಮೆಯು ಪಾರಿಜಾತ ವೃಕ್ಷ ವನ್ನು ಕಂಡು ಅದನ್ನು ಭೂಲೋಕಕ್ಕೆ ಒಯ್ಯುತ್ತಾಳೆ.

ಇಲ್ಲಿಗೆ ಈ ಪ್ರಸಂಗವು ಮಂಗಳವಾಗುತ್ತದೆ.

ದಿನಾಂಕ ೨೩ ಫೆಬ್ರವರಿ ೨೦೧೪ ರಂದು, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ, ಎಡನೀರು, ಕಾಸರಗೋಡು ಅವರು ಕೋರಮಂಗಲ, ಬೆಂಗಳೂರಿನಲ್ಲಿ ನಡೆಯಿಸಿಕೊಟ್ಟ ಪ್ರದರ್ಶನದ ಆಧಾರದ ಮೇಲೆ.

ಹಿಮ್ಮೇಳ
ಭಾಗವತರು: ಶ್ರೀ ದಿನೇಶ್ ಅಮ್ಮಣ್ಣಾಯ
ಚಂಡೆ/ಮದ್ದಳೆ  : ದಲಂತಮಜಲು ಸುಬ್ರಹ್ಮಣ್ಯ ಭಟ್

ಮುಮ್ಮೇಳ
ಶ್ರೀ ಕೃಷ್ಣ : ದೀಪಕ್ ರಾವ್ ಪೇಜಾವರ
ನರಕಾಸುರ: ಶ್ರೀ ರಾಧಾಕೃಷ್ಣ ನಾವಡ ಮದ್ದೂರು
(ಇತರ ಕಲಾವಿದರ ವಿವರಗಳಿದ್ದರೆ ದಯವಿಟ್ಟು ಕಾಮೆಂಟ್ ನಲ್ಲಿ ಹಾಕಿ )